ಶಿವಮೊಗ್ಗ:ಭಗವದ್ಗೀತೆಯ ಅಧ್ಯಯನದಿಂದ ಜೀವನ ಮೌಲ್ಯಗಳ ಕಲಿಕೆಯ ಜತೆಯಲ್ಲಿ ಸಮೃದ್ಧ ಜೀವನ ನಮ್ಮದಾಗುತ್ತದೆ ಎಂದು ಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ವಿನುತಾ ಹೇಳಿದರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವದ್ಗೀತೆ ನಾವೇಕೆ ಓದಬೇಕು ವಿಷಯ ಕುರಿತು ಮಾತನಾಡಿ, ಭಗವದ್ಗೀತೆ ಓದುವ ಜತೆಯಲ್ಲಿ ಅದರಲ್ಲಿನ ಅಂಶಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಸಂತೋಷವನ್ನೆ ಸದಾ ಬಯಸುತ್ತಾರೆ. ನೋವು ಇಲ್ಲದೆ ಸಂತೋಷ ಇಲ್ಲ. ರಾಮಾಯಣ, ಮಹಾಭಾರತ ಸೇರಿ ಅನೇಕ ಗ್ರಂಥಗಳು ಇಂದಿಗೂ ಪ್ರಸ್ತುತ. ಪ್ರಪಂಚದ ಮಹಾನ್ ವ್ಯಕ್ತಿಗಳ ಉನ್ನತ ಸಾಧನೆಗೆ ಭಗವದ್ಗೀತೆಯ ಸಂದೇಶಗಳು ಕಾರಣವಾಗಿವೆ. ಭಗವದ್ಗೀತೆಯ ಶ್ಲೋಕಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಒತ್ತಡದ ಪ್ರಪಂಚದಲ್ಲಿ ಆಧ್ಯಾತ್ಮ ಕಾರ್ಯಕ್ರಮಗಳು ಮನುಷ್ಯನನ್ನು ಖಿನ್ನತೆಯಿಂದ ದೂರಗೊಳಿಸುತ್ತವೆ. ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಭಗವದ್ಗೀತೆ ಕುರಿತು ರೋಟರಿ ಸದಸ್ಯರ ಪ್ರಶ್ನೆಗಳಿಗೆ ಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ವಿನುತಾ ಅವರು ಉತ್ತರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಕಡಿದಾಳ್ ಗೋಪಾಲ್, ಹೊಸತೋಟ ಸೂರ್ಯನಾರಾಯಣ, ಮಾಜಿ ಅಧ್ಯಕ್ಷ ಗಣೇಶ್, ಡಾ. ಪರಮೇಶ್ವರ್ ಶಿಗ್ಗಾವ್, ಡಾ. ಧನಂಜಯ, ಮಂಜುನಾಥ್, ಕಿಶೋರ್ಕುಮಾರ್, ಎ.ಒ.ಮಹೇಶ್, ಎಂ.ಪಿ.ನಾಗರಾಜ್, ನಾಗವೇಣಿ, ನಮಿತಾ ಸೂರ್ಯನಾರಾಯಣ, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಡಾ. ಕೌಸ್ತುಭಾ ಅರುಣ್, ಡಾ. ಲಲಿತಾ ಭರತ್, ರಮೇಶ್ ಭಟ್, ಸಂಜೀವ್, ರೋಟರಿ, ಇನ್ನರ್ವ್ಹೀಲ್ ಕ್ಲಬ್ ಸದಸ್ಯರು ಹಾಜರಿದ್ದರು.