
ಭದ್ರಾವತಿ : ಮದುವೆಗೆ ಹೋಗಿ ಮನೆಗೆ ವಾಪಸ್ ಆಗುವಾಗ ಹಿಂದಿನಿಂದ ಬಂದು ಎಂಟ್ರಿಕೊಟ್ಟ ಸರಗಳ್ಳರು, ಆಮೇಲೆ ಏನಾಯ್ತು?
ಭದ್ರಾವತಿ : ಉಕ್ಕಿನ ನಗರಿ ಭದ್ರಾವತಿಯಲ್ಲಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದ್ದು, ಪೊಲೀಸರು ಇವುಗಳನ್ನು ತಡೆಗಟ್ಟಲು ಪ್ರಯತ್ನಪಟ್ಟರು ಆಗುತ್ತಿಲ್ಲ. ಇಷ್ಟು ದಿನ ಗಾಂಜಾ, ಓಸಿ, ಇಸ್ಪೀಟ್, ರೌಡಿಗಳ ಹಾವಳಿ ಹೀಗೆ ಹತ್ತಾರು ಪ್ರಕರಣಗಳು ನಡೆಯುತ್ತಿರುವ ಬೆನ್ನೇಲೆ ಈಗ ಸರಗಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಹೌದು..ಸರಗಳ್ಳರ ಹಾವಳಿ ಭದ್ರಾವತಿಗೆ ಕಾಲಿಟ್ಟಿದ್ದು, ಭಾನುವಾರ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಹೌದು ನೀವೇನಾದ್ರೂ ಬಂಗಾರ ಧರಿಸಿ ನಡೆದುಕೊಂಡು ಹೋಗುವಾಗಲಿ, ಬೈಕ್ ನಲ್ಲಿ ಹೋಗುವಾಗಲಿ ಎಚ್ಚರದಿಂದ ಇರಬೇಕು.


ಏನಿದು ಘಟನೆ
ಪತಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು, ಮತ್ತೊಂದು ಬೈಕ್ ನಲ್ಲಿ ಆಗಮಿಸಿದ ಇಬ್ಬರು ಸರಗಳ್ಳರು ಅಪಹರಿಸಿ ಪರಾರಿಯಾದ ಘಟನೆ ಭದ್ರಾವತಿ ನಗರದ ಹೊರವಲಯ ಬೈಪಾಸ್ ರಸ್ತೆ ಬಳಿ ನಡೆದಿದೆ.
ಹಿರಿಯೂರು ವೀರಾಪುರದ ನಿವಾಸಿ ಹನುಮಂತೇಗೌಡ ಎಂಬುವರ ಪತ್ನಿ ಭಾಗ್ಯಮ್ಮ (62) ಎಂಬುವರೇ, ಮಾಂಗಲ್ಯ ಸರ ಕಳೆದುಕೊಂಡವರೆಂದು ಗುರುತಿಸಲಾಗಿದೆ. ಕಳುವಾದ ಸರ 35 ಗ್ರಾಂ ತೂಕದ್ದಾಗಿದ್ದು, 1.75 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಫೆ. 20 ರಂದು ಭದ್ರಾವತಿ ಪಟ್ಟಣದ ನ್ಯೂಟೌನ್ ಕಾಲೋನಿಯಲ್ಲಿರುವ ಸಂಬಂಧಿಯೋರ್ವರ ಮನೆಗೆ ಬೈಕ್ ನಲ್ಲಿ ದಂಪತಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಮನೆಗೆ ಹಿಂದಿರುಗುವಾಗ, ರಾತ್ರಿ 9. 30 ರ ಸುಮಾರಿಗೆ ಮಲೆ ಮಹದೇಶ್ವರ ದೇವಾಲಯ ರಸ್ತೆಯ ಬೈಪಾಸ್ ರಸ್ತೆ ಬಳಿ ಹನುಮಂತೇಗೌಡ ಅವರು ಬೈಕ್ ನ್ನು ನಿಧಾನಗೊಳಿಸಿದ್ದಾರೆ.
ಈ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಸರಗಳ್ಳರು, ಹನುಮಂತೇಗೌಡ ಪತ್ನಿಯ ಮಾಂಗಲ್ಯ ಸರ ಕಿತ್ತುಕೊಂಡು ಶಿವಮೊಗ್ಗದ ಕಡೆ ಪರಾರಿಯಾಗಿದ್ದಾರೆ. ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ