
ಸ್ಲಗ್
ಸಿದ್ದಾಪುರ ಹೊಸೂರು ತಾಂಡದಲ್ಲಿ ಟಗರು ಕಾಳಗ
ಭದ್ರಾವತಿ ತಾಲೂಕಿನ ಹೊಸೂರು ತಾಂಡ
ಕೋಡುಗಳ ಹಿಡಿದು ಹುರಿದುಂಬಿಸುತ್ತಿದ್ದ ಮಾಲೀಕ
ರಾಜ್ಯಮಟ್ಟದ ಟಗರು ಕಾಳಗ ಸ್ಪರ್ಧೆ
—-
ಭದ್ರಾವತಿ : ಸಾಮಾನ್ಯವಾಗಿ ಊರಮ್ಮನ ಹಬ್ಬದಲ್ಲಿ ಕುಸ್ತಿ. ಟಗರುಗಳ ಕಾಳಗ, ಇತರೆ ಆಟೋಟ ಸ್ಪರ್ಧೆಗಳು ಇರಲೇಬೇಕು. ಇದರಲ್ಲಿ ಜಟ್ಟಿಗಳ ನಡುವಿನ ಕುಸ್ತಿ ಹೇಗೋ ಹಾಗೆ ಈ ಕೊಬ್ಬಿದ ಕುರಿಗಳ ಕದನ ನೋಡುಗರ ಮೈನವಿರೇಳುಸುತ್ತದೆ.
ನೆರೆದವರು ಟಗರುಗಳ ಕದನ ನೋಡಿ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಟಗರುಗಳಲ್ಲಿ ರಣೋತ್ಸಾಹ ಎಬ್ಬಿಸುತ್ತಾರೆ. ಟಗರುಗಳ ಕೋಡುಗಳನ್ನು ಹಿಡಿದು ಹುರಿದುಂಬಿಸಿ ಎದುರಾಳಿ ಟಗರಿಗೆ ಉಡಾಯಿಸುವ, ಮಣಿಸುವ ದೃಶ್ಯ ನೋಡುವುದೇ ಒಂದು ರೋಮಾಂಚನ.
ಇದು ತಾಲೂಕಿನ ಸಿದ್ದಾಪುರ ಹೊಸೂರು ತಾಂಡದಲ್ಲಿ ಸಂತ ಸೇವಾಲಾಲ್ ಜಯಂತಿ ನಿಮಿತ್ತ ಪ್ರಥಮ ಬಾರಿಗೆ ರಾಜ್ಯಮಟ್ಟದ ಟಗರು ಕಾಳಗ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳು.


ಇಲ್ಲಿನ ಟಗರು ಕಾಳಗ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕುರಿ ಕಾಳಗದಲ್ಲಿ ಕುರಿಗಳನ್ನು ಐದು ವಿಭಾಗಗಳಾಗಿ ಮಾಡಲಾಗಿತ್ತು.
ಹಲ್ಲು ಬಾರದ ಕುರಿಗಳನ್ನು ಮರಿಕುರಿಗಳೆಂದು, ಆನಂತರ 2 ಹಲ್ಲಿನ, 4 ಹಲ್ಲಿನ, 6 ಹಲ್ಲಿನ ಮತ್ತು 8 ಹಲ್ಲಿನ ಕುರಿಗಳ ವಿಭಾಗಿಸಲಾಗಿತ್ತು. ಮರಿಕುರಿಗಳ ಕಾಳಗದಲ್ಲಿ 32 ಕುರಿಗಳು ಭಾಗವಹಿಸಿ ದೂಳು ಹಾರಿಸಿದವು. ಆನಂತರ ಎರಡ ಕುರಿ ವಿಭಾಗದಲ್ಲಿ 98 ಕುರಿಗಳು ಭಾಗಿಯಾಗಿದ್ದವು.
ನಡುರಾತ್ರಿವರೆಗೆ ನಾಲ್ಕು ಹಲ್ಲಿನ ಕುರಿ ಕಾಳಗ ನಡೆದಿತ್ತು. ಈ ಕಾಳಗವನ್ನು ನೋಡಲು ಜನರು ಬಿಸಿಲು, ಚಳಿಯೆನ್ನದೇ ಭಾರಿ ಉತ್ಸಾಹದಿಂದ ಭಾಗವಹಿಸಿದ್ದರು. ಕುರಿ ಕಾಳದ ಹೆದರಿ ಓಡುವ ಕುರಿಗಳು ನೋಡುಗರ ಬಳಿ ಬಂದಾಗ ಅವರೇ ಹಿಡಿದು ಮಾಲೀಕರಿಗೆ ನೀಡುವ ದೃಶ್ಯಗಳು ಕಂಡು ಬಂದವು. ಒಂದು ಕುರಿ ಜತೆ ಇಬ್ಬರಿಗಷ್ಟೆ ಕಾಳಗದ ಸ್ಥಳಕ್ಕೆ ಬರಲು ಅವಕಾಶ ಕಲ್ಪಿಸಲಾಗಿತ್ತು.ಸುಮಾರು 200ಕ್ಕೂ ಅಧಿಕ ಕುರಿಗಳು ಭಾಗವಹಿಸಿದ್ದವು. ಗೆದ್ದ ಕುರಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.
ಆಕರ್ಷಕ ಹೆಸರು: ವಾಯುಪುತ್ರ, ಸೈಲೆಂಟ್ ಕಿಲ್ಲರ್, ನೀಲಗುಂದ ಗಿಡ್ಡ, ಬೆಳ್ಳೂಡಿ ಗಿಡ್ಡ, ಛತ್ರಪತಿ, ಭದ್ರಿ, ರಾವಣ, ಇಂಡಿಯನ್ ಆರ್ಮಿ, ಪೈಲ್ವಾನ್, ಹೆಬ್ಬುಲಿ, ದುರ್ಗಿ, ಚೌಡಿ, ಮಿಠಾಯಿಸೂರಿ, ಚಿನ್ನಾ, ಭೀಮಾ, ಗಜಕೇಸರಿ, ಕಲ್ಕಿ ಹೀಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುರಿಗಳಿಗೆ ವಿಶಿಷ್ಠ, ಆಕರ್ಷಕ ಹೆಸರಗಳನ್ನು ಇಡಲಾಗಿತ್ತು.
ಸ್ಫರ್ಧೆ ಹೇಗೆ ನಡೆಯುತ್ತದೆ
ಈ ಟಗರು ಸ್ಪರ್ಧೆಗೂ ಕೆಲ ನಿಯಮಾವಳಿಗಳಿವೆ. ನಾಲ್ಕು ಹಂತದ ನಾಲ್ಕು ವಿಭಾಗಗಳಲ್ಲಿ ಆಡಿಸಲಾಗುತ್ತದೆ. ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಎಂಟು ಹಲ್ಲು ಎಂದು ವಿಂಗಡಿಸಲಾಗುತ್ತದೆ. ಅವುಗಳಿಗೆ ನಂಬರ್, ಸೀರಿಯಲ್ ಕೋಡ್ ಕೊಡಲಾಗುತ್ತದೆ.ಎರಡು ಹಲ್ಲಿನ ಟಗರಿಗೆ ಎರಡು ಹಲ್ಲಿನ ಟಗರನ್ನೇ ಕಾಳಗಕ್ಕೆ ಬಿಡಲಾಗುತ್ತದೆ. ಇಲ್ಲಿ ಲೀಗ್‌ನಂತೆ ಪಂದ್ಯಗಳು ನಡೆಯುತ್ತವೆ. ನಂತರ ಸೆಮಿ ಫೈನಲ್, ಫೈನಲ್ ಇರುತ್ತದೆ.ಎಂಟು ಹಲ್ಲಿನ ಟಗರಿನ ಜತೆ ಬೇಕಿದ್ದರೆ ಆರು ಹಲ್ಲಿನ, ನಾಲ್ಕು ಹಲ್ಲಿನ ಟಗರನ್ನು ಅಖಾಡಕ್ಕೆ ಇಳಿಸಬಹುದು. ಸಾಮರ್ಥ್ಯವಿದ್ದರೆ ಗೆಲ್ಲಬಹುದು. ಹಲ್ಲುಗಳ ಬೆಳವಣಿಗೆಯಂತೆ ಅವುಗಳ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.ನಾಲ್ಕು, ಆರು ಹಲ್ಲಿನ ವಿಭಾಗದಲ್ಲಿ ವಿಜೇತವಾದ ಟಗರುಗಳು ಬೇಕಿದ್ದರೆ ಎಂಟು ಹಲ್ಲಿನ ಟಗರುಗಳ ಪಂದ್ಯದಲ್ಲಿ ನೋಂದಾಯಿಸಿಕೊಳ್ಳಬಹುದು.
ಸ್ಪರ್ಧೆ ಮಾನದಂಡ ಹೇಗೆ?
ಕಾಳಗ ಸಂದರ್ಭ ಅಖಾಡದಲ್ಲಿ ರೆಫೆರಿ ಇರುತ್ತಾರೆ. ಎರಡೂ ಕಡೆಯ ಟಗರುಗಳನ್ನು ಅವುಗಳ ಹಲ್ಲುಗಳನ್ನು ಪರಿಶೀಲಿಸಿ ಪಂದ್ಯಕ್ಕೆ ಬಿಡುತ್ತಾರೆ. ಅವುಗಳಿಗೆ ಹುರಿದುಂಬಿಸಿ ಎರಡೂ ಟಗರುಗಳನ್ನು ಮುಖಾಮುಖಿ ಒಮ್ಮೆ ತೋರಿಸಿ 50 ಮೀಟರ್ ಅಂತರದಲ್ಲಿ ದೂರ ಕರೆದುಕೊಂಡು ಹೋಗಿ ನಿರ್ದಿಷ್ಟ ಸ್ಥಳದಲ್ಲಿ ಗುರುತು ಮಾಡಲಾದ ಜಾಗದಿಂದ ಬಿಡಲಾಗುತ್ತದೆ. ಅವು ಓಡಿ ಬಂದು ತಲೆ, ತಲೆಗೆ ಡಿಚ್ಚಿ ಹೊಡೆದುಕೊಳ್ಳುತ್ತವೆ. ಮತ್ತೆ ಪುನಃ ಅದೇ ರೀತಿ ಬಿಡಲಾಗುತ್ತದೆ. ಅವು ಗುದ್ದಾಡುವ ತನಕ ಅಥವಾ ಅದರಲ್ಲಿ ಯಾವುದಾದರೂ ಟಗರು ಅಖಾಡದಿಂದ ಪಲಾಯನವಾಗುವ ತನಕ ಹಾಗೂ ಟಗರಿನ ಮಾಲೀಕ ಸಾಕು ಎನ್ನುವ ತನಕ ಕಾಳಗ ನಡೆಯುತ್ತಿರುತ್ತದೆ.
ಕೋಡುಗಳೇ ಆಕರ್ಷಕ
ಕೊಬ್ಬಿದ ಟಗರುಗಳು ಇವುಗಳೇನು ಸಾಮಾನ್ಯ ಟಗರುಗಳಲ್ಲ. ಕಾಳಗಕ್ಕೆಂದೇ ಮೇವು, ಕಾಳು ಕೊಟ್ಟು ವಿಶೇಷ ಕಾಳಜಿಯಿಂದ ಸಾಕಿರುತ್ತಾರೆ. ಒಂದೊಂದು ಟಗರು ಏನಿಲ್ಲಾ ಎಂದರೂ 60 ರಿಂದ 80 ಕೆಜಿವರೆಗೂ ತೂಗುತ್ತವೆ. ಅವುಗಳ ಕೋಡುಗಳೇ ಆಕರ್ಷಕ ಹಾಗೂ ಕಾಳಗಕ್ಕೆ ಅತೀ ಅವಶ್ಯ. ಮುಂದಿನ ಪಂದ್ಯಕ್ಕೆ ತಯಾರಿಗೆದ್ದ ಹಾಗೂ ಸೋತ ಟಗರುಗಳು ಅದೊಂದೇ ಪಂದ್ಯಕ್ಕೆ ಸೀಮಿತವಲ್ಲ. ಕುಸ್ತಿ ಪಟುಗಳಂತೆ ಮುಂದೆ ಬೇರೆಡೆ ನಡೆಯುವ ಪಂದ್ಯಕ್ಕೆ ತಯಾರಿ ನಡೆಸಲಾಗುತ್ತದೆ. ಆದರೆ ಪಂದ್ಯದಲ್ಲಿ ಒಂದು ವೇಳೆ ಕೋಡು ಮುರಿದರೆ, ತಲೆಗೆ ಹೆಚ್ಚು ಪೆಟ್ಟು ಬಿದ್ದರೆ ಅವು ಆಟಕ್ಕೆ ಇಲ್ಲ. ಟಗರುಗಳಿಗೆ ಕೋಡುಗಳೇ ಮುಖ್ಯ.
ಗೆದ್ದರೆ ರಾಜ ಮರ್ಯಾದೆ
ಪಂದ್ಯಕ್ಕೆ ಬಂದ ಟಗರುಗಳು ಕುಸ್ತಿ ಪೈಲ್ವಾನರಿಗಿಂತ ಕಡಿಮೆ ಇಲ್ಲ. ಗೆದ್ದ ಟಗರನ್ನು ಇಬ್ಬರು, ಮೂವರು ಹೊತ್ತುಕೊಂಡು ಜೈಕಾರ ಹಾಕುತ್ತ ಹೋಗುತ್ತಾರೆ. ಅವುಗಳಿಗೆ ಶಾಲು ಹೊದಿಸಿ ನಿಲ್ಲಿಸುತ್ತಾರೆ. ಅಷ್ಟೆ ಸಾಲದೆಂಬಂತೆ ಅವುಗಳ ಬೆನ್ನು ತಟ್ಟಿ ಶಹಬ್ಬಾಸ್‌ಗಿರಿ ಹೇಳುತ್ತಾರೆ