ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಭದ್ರಾವತಿ ಮಹಿಳೆಯನ್ನು ತನ್ನ ಗಂಡನೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್ ನಲ್ಲಿ ನಡೆದಿದೆ.
ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್ ನಿವಾಸಿ ನವ್ಯಾಶ್ರೀ (26) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಪತಿ ಕಿರಣ್ಕುಮಾರ್ (30) ಎಂಬಾತನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರಾವತಿಯ ನವ್ಯಾಶ್ರೀ ಮತ್ತು ಚಿಕ್ಕಬಳ್ಳಾಪುರ ಮೂಲದ ಕಿರಣ್ಕುಮಾರ್ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಡ್ಯಾನ್ಸರ್ ಮತ್ತು ಕೊರಿಯೊಗ್ರಾರ್ ಆಗಿದ್ದ ನವ್ಯಾಶ್ರೀ, ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಳು. ಕಿರಣ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಪತ್ನಿಯ ನಡತೆ ಶಂಕಿಸಿ ಕತ್ತುಕೊಯ್ದು ಕೊಲೆ ಮಾಡಿದ ಪತಿ ಕೆಂಗೇರಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಕಾರಣವೇನು?
ಅನಿಲ್ ಎಂಬಾತ ಜತೆಗೆ ನವ್ಯಾಶ್ರೀಗೆ ಸ್ನೇಹ ಬೆಳೆದಿತ್ತು. ಇದನ್ನು ತಿಳಿದ ಕಿರಣ್ ಕೆರಳಿ ಪತ್ನಿಯೊಂದಿಗೆ ಆಗಾಗ್ಗೆ ಜಗಳ ಮಾಡುತ್ತಿದ್ದ. ಕೆಲ ದಿನಗಳಿಂದ ಕಿರಣ್ ಮನೆ ಬಿಟ್ಟು ಹೋಗಿದ್ದ. ಮಂಗಳವಾರ ನವ್ಯಾಶ್ರೀ ತನ್ನ ಸ್ನೇಹಿತೆ ಐಶ್ವರ್ಯಗೆ ಕರೆ ಮಾಡಿ ಪತಿಯಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಈ ತಕ್ಷಣ ಮನೆಗೆ ಬರುವಂತೆ ಮನವಿ ಮಾಡಿದ್ದಳು. ಐಶ್ವರ್ಯ ಮನೆಗೆ ಬಂದ ಮೇಲೆ ನನಗೆ ನೆಮ್ಮದಿ ಇಲ್ಲ. ಹೊರಗಡೆಯೂ ನೆಮ್ಮದಿ ಇಲ್ಲ ಎಂದು ಹೇಳಿ ಸ್ನೇಹಿತ ಅನಿಲ್ ಭೇಟಿ ಮಾಡಬೇಕೆಂದು ಇಬ್ಬರೂ ಕಾರಿನಲ್ಲಿ ರಾಜರಾಜೇಶ್ವರಿನಗರಕ್ಕೆ ಹೋಗಿದ್ದರು.
ಇತ್ತ ಮನೆಗೆ ಬಂದ ಕಿರಣ್ಕುಮಾರ್, ತನ್ನ ಬಳಿಯಿದ್ದ ಕೀ ಬಳಸಿ ಮನೆ ಲಾಕ್ ತೆಗೆದು ಒಳಗೆ ಹೋಗಿ ಲಾಕ್ ಮಾಡಿಕೊಂಡು ಬಚ್ಚಿಟ್ಟುಕೊಂಡಿದ್ದ.
ಮತ್ತೊಂದೆಡೆ ಅನಿಲ್ನ್ನು ಭೇಟಿ ಮಾಡಿದ ನವ್ಯಾಶ್ರೀ ಮತ್ತು ಐಶ್ವರ್ಯ ಕಂಠಮಟ್ಟ ಮದ್ಯ ಸೇವನೆ ಮಾಡಿದ್ದರು. ನಿನ್ನ ಗಂಡನ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು. ಆಗಲೇ ಬುದ್ಧಿ ಬರುತ್ತದೆ ಎಂದು ನವ್ಯಾಶ್ರೀಗೆ ಸ್ನೇಹಿತ ಅನಿಲ್ ಹೇಳಿಕೊಟ್ಟಿದ್ದ. ರಾತ್ರಿ 11.30ಕ್ಕೆ ಅನಿಲ್ ತನ್ನ ಕಾರಿನಲ್ಲಿ ಇಬ್ಬರನ್ನೂ ವಿಶ್ವೇಶ್ವರಯ್ಯ ಲೇಔಟ್ ಮನೆಗೆ ಡ್ರಾಪ್ ಮಾಡಿ ಹೋಗಿದ್ದ.
ಮನೆಗೆ ಬಂದ ಮೇಲೆ ಐಶ್ವರ್ಯ ಕಂಠಮಟ್ಟ ಬೀಯರ್ ಸೇವನೆ ಮಾಡಿದ್ದ ಕಾರಣಕ್ಕೆ ನಿದ್ದೆಗೆ ಜಾರಿದ್ದಳು. ಮತ್ತೊಂದೆಡೆ ನವ್ಯಾಶ್ರೀ, ತನ್ನ ಸ್ನೇಹಿತ ಅನಿಲ್ಗೆ ಕರೆ ಮಾಡಿ ಮನೆಗೆ ತಲುಪಿದ ಎಂದು ಮಾತನಾಡುತ್ತಿದ್ದಳು. ಇದನ್ನು ಕೇಳಿಸಿಕೊಂಡ ಕಿರಣ್ಕುಮಾರ್, ಹಾರೆಯಿಂದ ತಲೆಗೆ ಹೊಡೆದು ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೇ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಕಿರಣ್ಕುಮಾರ್ನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಚ್ಚರವೇ ಇರಲಿಲ್ಲ..!
ನವ್ಯಾಶ್ರೀ ಮತ್ತು ಕಿರಣ್ಕುಮಾರ್ ನಡುವೆ ಜಗಳವಾಗಿ ಆತ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇಷ್ಟಾದರೂ ಮನೆಯಲ್ಲಿದ್ದ ಐಶ್ವರ್ಯ ಕಂಠಮಟ್ಟ ಬೀಯರ್ ಸೇವನೆ ಮಾಡಿ ಮಲಗಿದ್ದ ಕಾರಣ ಎಚ್ಚರವೇ ಇರಲಿಲ್ಲ. ಆರೋಪಿ ಠಾಣೆಗೆ ಬಂದು ಹೇಳಿಕೆ ಕೊಟ್ಟ ಮೇಲೆ ಪೊಲೀಸರು ಕೃತ್ಯ ನಡೆದ ಮನೆಗೆ ಹೋಗಿ ನೋಡಿದಾಗಲೂ ಐಶ್ವರ್ಯ ಮಲಗಿದ್ದಳು. ಕೊನೆಗೆ ಆಕೆಯನ್ನು ಎಚ್ಚರಗೊಳಿಸಿ ಕೇಳಿದಾಗ ಗಾಬರಿಗೊಂಡಿದ್ದಾಳೆ. ಈಕೆಯ ಕಡೆಯಿಂದಲೇ ದೂರು ಪಡೆದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.