
ನಂದೀಶ್ ಭದ್ರಾವತಿ, ಶಿವಮೊಗ್ಗ
ಅದೊಂದು ಹೃದಯ ವಿದ್ರಾವಿಕ ಘಟನೆ.. ಆಕೆ ಪ್ರೀತಿಸಿದವನ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಕೊಂಡು ಅವನನ್ನ ಮದುವೆಯಾಗಲು ನಿರ್ಧರಿಸಿದ್ಲು. ಆದ್ರೆ ಮದುವೆ ,ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿತ್ತು. ಕೊನೆಗೆ ಅದು ಕೊಲೆಯಾಗುವ ಹಂತಕ್ಕೆ ತಲುಪಿದ್ದು ನಿಜಕ್ಕೂ ದುರಂತ. ಬಾಳಿ ಬದುಕಬೇಕಿದ್ದ ಯುವತಿ ಪ್ರೀತಿಯ ಬಲೆಯಿಲ್ಲಿ ಬಿದ್ದು ಶವವಾಗಿದ್ದಾಳೆ. ಅಷ್ಟಕ್ಕೂ ಆ ಕೊಲೆ ನಡೆದ ರೀತಿಯ ರೋಚಕ…

ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅಂತ ಗೋಳಾಡುವವರ ಮಧ್ಯೆ ಇಲ್ಲೊಬ್ಬ ಯುವಕ ಮನಸ್ಸಾರೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಕೊಲೆ ಮಾಡಿ ಶವ ಹೂತಿಕ್ಕಿರುವ ಹೃದಯವಿದ್ರಾವಕ ಘಟನೆ ನಡೆದಿದೆ..ಹೌದು ಸಾಗರ ಮೂಲದ ಸೃಜನ್ (21) ಕೊಲೆ ಮಾಡಿದ ಯುವಕನಾದರೆ, ಕೊಪ್ಪ ಮೂಲದ ಸೌಮ್ಯ ಕೊಲೆಯಾದ ಯುವತಿ.


ತೀರ್ಥಹಳ್ಳಿಯ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಸಾಗರ ಮೂಲದ ಸೃಜನ್ 2021 ರಲ್ಲಿ ಕೆಲಸ ಮಾಡುತ್ತಿದ್ದ. ಹಾಗೆ ಸಾಲವನ್ನು ಸಂಗ್ರಹ ಮಾಡಲು ಸೃಜನ್ ಎಲ್ಲ ಊರಿಗೆ ಹೋಗುತ್ತಿದ್ದ ಅಂತೆಯೇ ಇದೇ ಫೈನಾನ್ಸ್ ಬ್ರಾಂಚ್ ಆಫೀಸ್ ವೊಂದು ಕೊಪ್ಪದಲ್ಲಿತ್ತು. ಅಲ್ಲಿಯೂ ಸಹ ಸೃಜನ್ ಸಾಲ ವಸೂಲಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕೊಪ್ಪದ ಸೌಮ್ಯಳಿಗೂ ಸೃಜನ್ ಸಾಲ ಕೊಟ್ಟಿದ್ದು, ಅವಳ ಮನೆಗೆ ಸಾಲ ವಸೂಲಿಗೆ ಹೋಗುತ್ತಿದ್ದ. ಹೀಗಿರುವಾಗ ಸೃಜನ್ ಗೆ ಸೌಮ್ಯಳ ಪರಿಚಯವಾಗಿದ್ದು, ಇವರಿಬ್ಬರು ತಮ್ಮ ಅಂತಃಕರಣದ ಪ್ರೀತಿ ಹಂಚಿಕೊಂಡಿದ್ದಾರೆ. ನಂತರ ಚಾಟಿಂಗ್ ಶುರುವಾಗಿದೆ. ಇವರಿಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಸಲುಗೆಗೆ ತಿರುಗಿ ಪ್ರೀತಿಯಾಗಿ ಬದಲಾಗಿದೆ.
ಸೃಜನ್ ಹಾಗೂ ಸೌಮ್ಯಾ ಇಬ್ಬರೂ ಪ್ರೀತಿಯ ಅಮಲಿನಲ್ಲಿದ್ದು, ಇವರಿಬ್ಬರು ಪ್ರಣಯ ಪಕ್ಷಿಗಳಾಗಿ ತಿರುಗಾಡುತ್ತಿದ್ದರು. ಈ ಪ್ರೀತಿಯ ವಿಚಾರ ಸೌಮ್ಯ ತಾಯಿಗೆ ಗೊತ್ತಾಗಿತ್ತು. ಅಲ್ಲದೇ ಮದುವೆಗೆ ಅಸ್ತು ಅಂದಿದ್ದರು. ಆದರೆ, ಕೆಳ ಸಮುದಾಯದ ಸೌಮ್ಯಾಳನ್ನು ಮೇಲ್ವರ್ಗದ ಸೃಜನ್ ಮದುವೆ ಆಗುವುದಕ್ಕೆ ಒಪ್ಪಿರಲಿಲ್ಲ. ಈಗಲೇ ಮದುವೆ ಬೇಡ, ಮನೆಯ ಜವಾಬ್ದಾರಿ ನನಗಿದ್ದು, ಆ ಜವಾಬ್ದಾರಿ ಮುಗಿಸಿದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮದುವೆಯನ್ನು ಮುಂದೂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೇ ಅಂದ ಪ್ರಿಯಕರ
ಜು.2ರಂದು ಮನೆಯಿಂದ ಸೃಜನ್ ಜೊತೆಗೆ ಹೋಗಿದ್ದ ಸೌಮ್ಯಾ ರಾತ್ರಿಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸೌಮ್ಯಾಳ ಪ್ರೀತಿ ವಿಷಯ ಗೊತ್ತಿದ್ದ ಆಕೆಯ ತಾಯಿ, ಮಗಳ ಮೊಬೈಲ್‌ಗೆ ಫೋನ್ ಮಾಡಿದ್ದರು. ಆದರೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸೃಜನ್‌ಗೆ ಫೋನ್ ಮಾಡಿದಾಗ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೆ ಎಂದು ಸುಳ್ಳು ಹೇಳಿದ್ದನು. ಆತಂಕದಿಂದ ಪಾಲಕರು ಜು.3ರಂದು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಸೃಜನ್ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಒಂದೊಂದಾಗಿ ಆರೋಪಿ ಸೃಜನ್ ಉತ್ತರ ನೀಡಿದ್ದಾನೆ.
ಜು.2 ರಂದು ನನಗೆ ಆರೋಗ್ಯ ತರಬೇತಿಗೆ ಹೋಗುವುದಿದೆ ಎಂದು ಮನೆಯಿಂದ ಸೌಮ್ಯ ತನ್ನ ಪ್ರಿಯತಮ ಸೃಜನ್‌ನನ್ನು ನೋಡಲು ಸಾಗರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ನಂತರ ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಯುವತಿ ಸೌಮ್ಯಾ ಒತ್ತಾಯಿಸಿದ್ದಾಳೆ. ಇದರಿಂದ ಕುಪಿತಗೊಂಡ ಸೃಜನ್, ಸೌಮ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಜಲ ಜೀವನ್ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಶವ
ಸೌಮ್ಯಳ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸೃಜನ್ ಮುಚ್ಚಿಟ್ಟಿದ್ದನು. ಬಳಿಕ ತಾಳಗುಪ್ಪಕ್ಕೆ ತೆರಳಿ ತನ್ನ ಕಾರು ತೆಗೆದುಕೊಂಡು ಬಂದು ಮೃತದೇಹವನ್ನು ಸಾಗಿಸಿದ್ದನು. ನಂತರ ಮೃತದೇಹ ಸಾಗಿಸಿ ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿಯ ಮುಂಬಾಳು ಕ್ರಾಸ್ ಬಳಿ ಜಲಜೀವನ್ ಮಿಷನ್ ಕಾಮಗಾರಿಗಾಗಿ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಯಲ್ಲಿಯೇ ಸೌಮ್ಯಳ ಮೃತದೇಹವನ್ನು ಹೂತು ಹೋಗಿದ್ದಾನೆ. ಯುವತಿ ಸೌಮ್ಯ ನಾಪತ್ತೆ ಪ್ರಕರಣದ ತನಿಖೆ ಕೈಗೊಂಡ ಕೊಪ್ಪ ಠಾಣೆ ಪೊಲೀಸರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ. ಜು.3ರಿಂದ 19ರವರೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಸೌಮ್ಯಾಳ ಸುಳಿವು ಸಿಕ್ಕಿರಲಿಲ್ಲ. ಕೊಪ್ಪ ಠಾಣೆ ಪೊಲೀಸರು ಸೌಮ್ಯಾಳ ಮೊಬೈಲ್ ಸಿಡಿಆರ್ (ಕಾಲ್ ರೇಕಾರ್ಡರ್) ಪರಿಶೀಲಿಸಿದಾಗ ಸೃಜನ್‌ಗೆ ಹಲವು ಬಾರಿ ಕರೆ ಮಾಡಿದ್ದು ತಿಳಿದಿತ್ತು. ಇದನ್ನು ಅರಿತ ಪೊಲೀಸರು ಸೃಜನ್‌ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ವಿಚಾರಣೆಗೆ ಬಂದಿದ್ದ ಸೃಜನ್ ಪೊಲೀಸರ ಬಳಿ ಲಾಕ್ ಆಗಿದ್ದಾನೆ. ಕೊಲೆಯ ಸಂಪೂರ್ಣ ಮಾಹಿತಿ ಬಾಯಿ ಬಿಟ್ಟಿದ್ದಾನೆ. ಒಟ್ಟಾರೆ ಬಾಳಿ ಇನ್ನೊಂದು ಮನೆಗೆ ಬೆಳಕಾಗಬೇಕಿದ್ದ ಸೌಮ್ಯಳ ಕಥೆ ಮುಗಿಸಿದ ಸೃಜನ್ ಈಗ ಕಂಬಿ ಎಣಿಸಬೇಕಾಗಿದೆ.

