ದಾವಣಗೆರೆ : ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯಕ್ಕೆ 2024-25ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ಅನುಮತಿ ದೊರೆತಿದೆ ಎಂದು ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 26 ವರ್ಷಗಳಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು 2023ರ ಮಾ. 3 ರಂದು ಯುಜಿಸಿಗೆ ಮನವಿ ಸಲ್ಲಿಸಲಾಗಿತ್ತು. 2024ರ ಜ. 20 ರಂದು ಯುಜಿಸಿ ಸಂಸ್ಥೆ ಕಾಲೇಜಿಗೆ ಭೇಟಿ ನೀಡಿ ಎಲ್ಲ ರೀತಿಯಲ್ಲಿ ಪರಿಶೀಲಿಸಿ ಹತ್ತು ವರ್ಷಗಳವರೆಗೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಅನುಮೋದನೆ ಕೊಟ್ಟಿದೆ ಎಂದು ತಿಳಿಸಿದರು.
ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಅನುಮೋದನೆ ದೊರೆತ ಕಾರಣ ಪಠ್ಯಕ್ರಮದಲ್ಲಿ ನಮ್ಮ ಕಾಲೇಜಿಗೆ ಶೇ. 30 ರಷ್ಟು ರಿಯಾಯಿತಿ ದೊರೆಯುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಅನುಗುಣವಾದ ಪಠ್ಯ ಸೇರ್ಪಡೆ ಮಾಡಬಹುದು. ಪರೀಕ್ಷೆ ನಡೆಸುವುದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತೇವೆ. ಆದಷ್ಟು ಬೇಗ ಪರೀಕ್ಷೆ ನಡೆಸಿ, ಫಲಿತಾಂಶ ಕೊಡಲು ಅನುಕೂಲ ಆಗುತ್ತದೆ. ಸ್ವಾಯತ್ತ ಸಂಸ್ಥೆ ಆದ ನಂತರವೂ ಆಯಾ ವರ್ಷ ಸರ್ಕಾರ ನಿಗದಿಪಡಿಸಿದ ಶುಲ್ಕ ಮತ್ತು ಪ್ರವೇಶ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈಗ ಬಿಐಇಟಿ ಬೆಂಗಳೂರಿನ ಬಿಎಂಎಸ್, ಆರ್ ವಿ ಇಂಜಿನಿಯರಿಂಗ್ ಕಾಲೇಜ್ ನಂತೆ ಪ್ರತಿಷ್ಠಿತ ಸಂಸ್ಥೆಯಾಗಲಿದೆ ಎಂದು ತಿಳಿಸಿದರು.
ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್ ಅಭ್ಯಾಸ ಮಾಡಿರುವ 355 ವಿದ್ಯಾರ್ಥಿಗಳಿಗೆ ದೇಶದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ ಎಂದು ತಿಳಿಸಿದರು.
ಮೇ. 25 ರಂದು ಅಂತಿಮ ವರ್ಷದ ವಿದ್ಯಾರ್ಥಿಗಳ ತಯಾರಿಸಿದ ವಿವಿಧ ಆವಿಷ್ಕಾರ, ಪರಿಕರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಡಾ. ಜಿ.ಪಿ. ದೇಸಾಯಿ, ಡಾ. ನಿರ್ಮಲ, ಡಾ. ಕರಿಬಸಪ್ಪ ಇದ್ದರು.