ದಾವಣಗೆರೆ : ಹೇಳಿ, ಕೇಳಿ ದಾವಣಗೆರೆ ಅನ್ನದಾತನ ಊರು, ಈ ಊರಿನಲ್ಲಿ ರೈತ ದುಡಿದರೆ ಮಾತ್ರ ವ್ಯಾಪಾರ, ವಹಿವಾಟು ಚೆನ್ನಾಗಿರುತ್ತದೆ…ಅದರಲ್ಲೂ ಹೈನುಗಾರಿಕೆಯಲ್ಲಿ ದಾವಣಗೆರೆ-ಚಿತ್ರದುರ್ಗ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ…ಆದರೆ ಇಂತಹ ಊರಿನಲ್ಲಿ ಪ್ರತ್ಯೇಕ ಹಾಲಿನ ಒಕ್ಕೂಟವಿಲ್ಲ…
ಹೌದು….ಇಲ್ಲಿನ ಜನರಿಗೆ ಪ್ರತ್ಯೇಕ ಹಾಲಿನ ಒಕ್ಕೂಟವಿಲ್ಲದ ಕಾರಣ ಸ್ಥಳಿಯವಾಗಿ ರೈತರಿಗೆ ತೊಂದರೆ ಯಾಗುತ್ತಿದೆ..ಹೀಗಾಗಿ ಇಲ್ಲೊಬ್ಬ ರೈತ ತನ್ನ ಜನರಿಗೆ ಪ್ರತ್ಯೇಕ ಹಾಲಿನ ಒಕ್ಕೂಟ ಬೇಕೆಂದು ಹಗಲಿರುಳು ಜನಪ್ರತಿನಿಧಿಗಳ ದುಂಬಾಲು ಬಿದ್ದಿದ್ದಾರೆ.
ಶಿಮುಲ್ ಉಪಾಧ್ಯಕ್ಷ, ರೈತರಾಗಿರುವ ಎಚ್.ಕೆ.ಬಸಪ್ಪ ಪ್ರತ್ಯೇಕ ಹಾಲಿನ ಒಕ್ಕೂಟ ಸ್ಥಾಪನೆಗೆ ಹೋರಾಟಕ್ಕೆ ಧುಮುಕಿರುವ ವ್ಯಕ್ತಿ. ಅದಕ್ಕಾಗಿಯೇ ಜನಪ್ರತಿನಿಧಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಹ ಬಸಪ್ಪ ಹೋರಾಟಕ್ಕೆ ಸ್ಪಂದನೆ ಮಾಡಿದ್ದಾರೆ.
ರೈತರಿಗೋಸ್ಕರ ಹಗಲಿರುಳು ಶ್ರಮ
ಸ್ವತಃ ರೈತರಾಗಿರುವ ಎಚ್ .ಕೆ. ಬಸಪ್ಪ ರೈತರುಗೋಸ್ಕರ ಹಗಲಿರುಳು ಶ್ರಮ ಪಡುತ್ತಿದ್ದಾರೆ. ಅದರಂತೆ ಶಿಮುಲ್ ನಿಂದ ಸಿಗುವ ಎಲ್ಲ ಉಪಯೋಗಗಳನ್ನು ರೈತರಿಗೆ ಕೊಡಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಬಸಪ್ಪ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಶಿವಮೊಗ್ಗ ಹಾಲು ಒಕ್ಕೂಟಕ್ಕೆ (ಶಿಮುಲ್) ಪ್ರತಿದಿನ 7.6 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ 70,000 ಹಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಿದ್ದೇನೆ.
ಹಾಲು ಹಾಕುವ ಪ್ರತಿ ರೈತರೂ ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಬೇಕು. ಒಕ್ಕೂಟದಿಂದ ನೀಡಲಾಗುವ ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ ರೂ. 10 ಪೈಸೆಯನ್ನು ಕಲ್ಯಾಣ ಟ್ರಸ್ಟ್ಗೆ ಭರಿಸಲಾಗುತ್ತದೆ. ಇದು ವರ್ಷಕ್ಕೆ ರೂ. 20 ಕೋಟಿಯಿಂದ ರೂ. 22 ಕೋಟಿ ಆಗುತ್ತದೆ. 18ರಿಂದ 59 ವಯಸ್ಸಿನ ಶೇರುದಾರರು ಮರಣ ಹೊಂದಿದರೆ ಒಕ್ಕೂಟದಿಂದ ರೂ. 1 ಲಕ್ಷ, 61 ವರ್ಷ ಮೇಲ್ಪಟ್ಟವರಿಗೆ ರೂ. 40,000 ವಿಮೆ ಪರಿಹಾರ ಕೊಡಲಾಗುತ್ತದೆ’ ಈ ಎಲ್ಲ ಉಪಯೋಗಗಳನ್ನು ರೈತರಿಗೆ ಕೊಡಿಸಲು ಶ್ರಮಿಸುತ್ತಿದ್ದೇನೆ ಎನ್ನುತ್ತಾರೆ ಬಸಪ್ಪ
ಸದನದಲ್ಲಿ ಒತ್ತಾಯ : ತ್ಯಾವಣಗಿ ಗ್ರಾಮಕ್ಕೆ ಮಾಯಕೊಂಡ ಶಾಸಕ ಬಸವಂತಪ್ಪ ಬಂದ ವೇಳೆ, ಪ್ರತ್ಯೇಕ ಹಾಲಿನ ಒಕ್ಕೂಟಕ್ಕೆ ಶಿಮುಲ್ ಉಪಾಧ್ಯಕ್ಷ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಶಾಸಕ ಬಸವಂತಪ್ಪ ಸದನದಲ್ಲಿ ಪ್ರತ್ಯೇಕ ಹಾಲಿನ ಒಕ್ಕೂಟ ಬೇಕೆಂದು ಮನವಿ ಮಾಡಿದ್ದರು.
ಏನು ಒತ್ತಾಯ : ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಿದರೆ ಇಲ್ಲಿನ ರೈತರಿಗೆ ಸಾಕಷ್ಟು ಉಪಯೋಗವಾಗಲಿದೆ ಎಂದು ಸದನದಲ್ಲಿ ಶಾಸಕ ಬಸವಂತಪ್ಪ ಒತ್ತಾಯಿಸಿದ್ದರು.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದ ಶಾಸಕ ಕೆ.ಎಸ್.ಬಸವಂತಪ್ಪ, ೨೦೧೫ರಲ್ಲಿ ಅಂದಿನ ಸರ್ಕಾರದ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು ಪ್ರತ್ಯೇಕ ಹಾಲು ಒಕ್ಕೂಟ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಅದು ಆರಂಭವಾಗಿಲ್ಲ ಎಂದು ಹೇಳಿದ್ದರು.
ಮಾಯಕೊಂಡ ಕ್ಷೇತ್ರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭ ಮಾಡಲು ಈಗಾಗಲೇ ಕಲ್ಪನಹಳ್ಳಿ ಗ್ರಾಮದಲ್ಲಿ ಜಮೀನು ಹಾಗೂ ರಸ್ತೆ ಸಂಪರ್ಕವನ್ನು ಒದಗಿಸಿಕೊಟ್ಟಿದೆ. ಇದಕ್ಕೆ ಬೋರ್ಡ್ ನಿಗಮವೂ ಕೂಡ ಸಮ್ಮಿತಿ ನೀಡಿದೆ. ಹೀಗಾಗಿ ಕೂಡಲೇ ಆರಂಭಿಸಬೇಕೆಂದು ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿದರು.
ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿವೆ. ಈ ಭಾಗದಲ್ಲಿ ಹಾಲು ಒಕ್ಕೂಟ ಆರಂಭಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಕ್ಕೆ ಸದನದಲ್ಲಿ ಪ್ರತ್ರಿಕ್ರಿಯೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಹಿಂದೆ ದಾವಣಗೆರೆ ಮತ್ತು ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಲು ಕ್ರಮಬದ್ಧವಾಗಿ ಮಾಡಿಲ್ಲ. ಇದರಿಂದ ಸಮಸ್ಯೆ ಆಗಿದೆ. ಈಗ ಕೆಎಂಎಫ್ಗೆ ಬಂದಿದ್ದು, ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆ ರೈತರ ಸಂಕಷ್ಟಕ್ಕೆ ರೈತನೇ ಬೇಕಾಗಿದ್ದು , ಹೈನೋದ್ಯಮಿಗಳು ರೈತ ಬಸಪ್ಪರ ಕೈ ಬಲಪಡಿಸಿದರೆ, ಖಂಡಿತ ಯಶಸ್ಸು ಸಿಗಲಿದೆ ಎಂಬುದು ರೈತರ ಅಭಿಪ್ರಾಯ.