ದಾವಣಗೆರೆ : ಈ ಸಲದ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ಜಾಹೀರಾತು ಫೈಟ್ ಜೋರಾಗಿದೆ. ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತನ್ನು ಪ್ರಕಟಿಸಿ ವ್ಯಾಪಕವಾಗಿ ಸದ್ದು ಮಾಡಿತ್ತು. ಈಗ ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರ ವಿರುದ್ದ 9 ಕಾರಣಗಳನ್ನು ನೀಡಿ ಕಾಂಗ್ರೆಸ್ ಡೇಂಜರಸ್ ಎಂದು ಜಾಹೀರಾತು ನೀಡಿದೆ. ಅಲ್ಲದೆ ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್ ಸರ್ಕಾರ ಎಂದು ಆಪಾದಿಸಿ 10 ಕಾರಣಗಳನ್ನು ನೀಡಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಪೇಸಿಎಂ ಪೋಸ್ಟರ್ ಅಭಿಯಾನ ಭಾರೀ ಸದ್ದು ಮಾಡಿತ್ತು. ಲೋಕಸಭೆ ಚುನಾವಣೆಗೂ ಕಾಂಗ್ರೆಸ್ ಇದೇ ಜಾಹೀರಾತು ತಂತ್ರವನ್ನು ಅನುಸರಿಸಿತು. ಕೇಂದ್ರ ಸರ್ಕಾರ ಹಾಗೂ ಬಿಜೆಪಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 19ರಂದು ರಾಜ್ಯದ ಬಹುತೇಕ ದಿನಪತ್ರಿಕೆಗಳಿಗೆ ಜಾಹೀರಾತೊಂದನ್ನು ನೀಡಿತು. ಅದರಲ್ಲಿ, ದೊಡ್ಡದಾದ ಚೊಂಬಿನ ಫೋಟೊ ಪ್ರಕಟಿಸಿ, ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂದು ಕುಹಕವಾಡಿತ್ತು.
ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು, ತೆರಿಗೆ ಹಂಚಿಕೆಯಲ್ಲಿ ಚೊಂಬು, ರೈತರ ಆದಾಯ ಡಬಲ್ ಮಾಡುವ ಚೊಂಬು, ಬರ ನೆರೆ ಪರಿಹಾರದ ಚೊಂಬು, 27 ಜನ ಬಿಜೆಪಿ ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು ಎಂದು ಕಾಂಗ್ರೆಸ್ ಜಾಹೀರಾತು ನೀಡಿತ್ತು.
ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ಗೆ ತಿರುಗೇಟು ನೀಡಿದ ಬಿಜೆಪಿ, 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲುಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ‘ಇಷ್ಟೇ ವ್ಯತ್ಯಾಸ’ ಎಂದಿತ್ತು. ‘ಚೊಂಬು’ ವಿಚಾರವಾಗಿ ಪ್ರತಿದಾಳಿ ನಡೆಸಿದ್ದ ಬಿಜೆಪಿ, ‘ಜನರಿಂದ ಕಾಂಗ್ರೆಸ್ಗೆ ಚೊಂಬೇ ಗ್ಯಾರಂಟಿ’ ಎಂದು ಟ್ವೀಟ್ ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮತ್ತೆ ಜಾಹೀರಾತು ನೀಡಿದ ಕಾಂಗ್ರೆಸ್, ‘ಮೋದಿ ಸರ್ಕಾರಕ್ಕೆ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು 13 ರೂಪಾಯಿ ಮಾತ್ರ. ಈ ಅನ್ಯಾಯವನ್ನು ಎಲ್ಲಿಯವರೆಗೆ ಸಹಿಸಬೇಕು’ ಎಂದು ಉಲ್ಲೇಖಿಸಿತ್ತು. ಇದ್ರಿಂದ ಕೆರಳಿ ಕೆಂಡವಾಗಿರೋ ರಾಜ್ಯ ಬಿಜೆಪಿ ಇವತ್ತು ಪತ್ರಿಕಾ ಜಾಹೀರಾತು ಸಮರಕ್ಕಿಳಿದಿದೆ.
‘ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತಿನಲ್ಲಿ ಲವ್ ಜಿಹಾದ್, ಕುಕ್ಕರ್ ಬಾಂಬ್, ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಸೇರಿದಂತೆ ಹಲವು ವಿಚಾರಗಳನ್ನು ಬಿಜೆಪಿ ಉಲ್ಲೇಖಿಸಿತು. ಜತೆಗೆ, ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದೆ. ಈ ಮಧ್ಯೆ, ‘ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್’ ಎಂದು ಬಿಜೆಪಿ ಜಾಹೀರಾತು ನೀಡಿತು. ಅದರಲ್ಲಿ, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು ನೀಡಲಾಗಿದೆ ಎಂದು ಉಲ್ಲೇಖಿಸಿತು. ಮುಂದುವರಿದು, ಕಾಂಗ್ರೆಸ್ ಆಡಳಿತದಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಚಿಪ್ಪು, ಬರದಿಂದ ತತ್ತರಿಸಿದ ರೈತರ ಕೈಗೆ ಚಿಪ್ಪು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗರ ಕೈಗೆ ಚಿಪ್ಪು, ದಲಿತರ 11 ಸಾವಿರ ಕೋಟಿ ದುರ್ಬಳಕೆ ಮಾಡಿಕೊಂಡು ತಳಸಮುದಾಯದ ಕೈಗೆ ಚಿಪ್ಪು, ಪ್ರತಿದಿನ ಪ್ರಯಾಣ ಮಾಡುವ ಕಾರ್ಮಿಕರ ಕೈಗೆ ಚಿಪ್ಪು, ವಿದ್ಯಾನಿಧಿ ನೀಡದೆ ವಿದ್ಯಾರ್ಥಿಗಳ ಕೈಗೆ ಚಿಪ್ಪು, ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದುಗಳ ಕೈಗೆ ಚಿಪ್ಪು, ಕಿಸಾನ್ ಸಮ್ಮಾನ್ನ 24,000 ಸ್ಥಗಿತಗೊಳಿಸಿ ರೈತರ ಕೈಗೆ ಚಿಪ್ಪು, ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಕೈಗೆ ಚಿಪ್ಪು ನೀಡಿದೆ ಅಂತೇಳಿ ಉಲ್ಲೇಖಿಸಿದೆ.. ಇನ್ನ ಕಾಂಗ್ರೆಸ್ ಡೇಂಜರ್ ಅಂತೇಳೋ ಬಿಜೆಪಿ ಜಾಹೀರಾತಿನ ಬಗ್ಗೆ ಸಿಎಂ ಸಿದ್ರಾಮಯ್ಯ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ?
ಅದೇನೇ ಇರಲಿ, ಬಿಜೆಪಿ ನಾಯಕರು ಕಾಂಗ್ರೆಸ್ ಚೊಂಬು ಅಸ್ತ್ರಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರೋ ಚೊಂಬಿಗೆ ಉತ್ರ ಕೊಡಲಾರದೆ ಈಗ ರಾಜ್ಯ ಕಾಂಗ್ರೆಸ್ ವಿರುದ್ಧ ಚಿಪ್ಪಿನ ಅಸ್ತ್ರ ಜಳಪಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ 2019ರಿಂದ 2023ರ ಮೇ ವರೆಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತಲ್ವಾ.? ರಾಜ್ಯದ ಜನರಿಗೆ ನೀವ್ಯಾಕೆ ಚಿಪ್ಪುಕೊಟ್ರಿ..? ಬೆಲೆ ಏರಿಕೆಯ ಚಿಪ್ಪು.? 40 ಪರ್ಸೆಂಟ್ ಕಮಿಷನ್ ಕಳಂಕದ ಚಿಪ್ಪು., ಕೋವಿಡ್ ಅವ್ಯವಹಾರದ ಚಿಪ್ಪು, ಬಿಟ್ ಕಾಯಿನ್ ಚಿಪ್ಪು, ಆ್ಯಕ್ಸಿಜನ್ ಸಪ್ಲೇ ಮಾಡೋದ್ರಲ್ಲಿ ಚಿಪ್ಪು, ನೆರೆ ಪರಿಹಾರ ತಂದುಕೊಡೋದ್ರಲ್ಲಿ ಚಿಪ್ಪು, 545 ಪಿಎಸ್ಐ ಸ್ಕ್ಯಾಂನ ಚಿಪ್ಪು.. ಇವೆಲ್ಲಾ ಚಿಪ್ಪುಗಳ ಸರಮಾಲೆಯನ್ನ ಇಟ್ಕೊಂಡು ಈಗ ಕೊಚ್ಚೆ ಮೇಲೆ ಕಲ್ಲು ಹಾಕಿದ್ರೆ ಏನಾಗುತ್ತೆ ಅನ್ನೋ ಅರಿವಿಲ್ವಾ ಬಿಜೆಪಿಯವರಿಗೆ ಅಂತೇಳಿ ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ. ಈ ಬಗ್ಗೆ ನೀವೇನಂತಿರಾ?