ಹೊಸ ವರ್ಷಾಚರಣೆ
ಡಿಸೆಂಬರ್ 31 ರ ರಾತ್ರಿ ಪೂರ್ವಭಾವಿ
ಯೋಜನೆಯಂತೆ ನಗರದ ಬಾರೊಂದರಲ್ಲಿ
ಆತ್ಮೀಯ ಗೆಳೆಯರೆಲ್ಲಾ ಸೇರಿ,
ಮದ್ಯ ಸೇವಿಸಿದರು ಕಂಠಪೂರ್ತಿ !
ಮಧ್ಯರಾತ್ರಿಯಾಗುವವರೆಗೂ
ಕುಣಿದು ಕುಪ್ಪಳಿಸಿ ನಲಿದಾಡಿ
ಬಿಲ್ ಪಾವತಿಸಿದಾಗ
ಬಾರ್ ಮಾಲೀಕ ತಿಳಿಸಿದ ಸಂತಸದಿಂದ
“ಹೊಸ ವರ್ಷದ ಶುಭಾಶಯ”
ಪರಸ್ಪರರು ಶುಭಾಶಯ ವಿನಿಮಯ ಮಾಡಿ,
ತೆರಳಿದರು ಬೈಕ್ ನಲ್ಲಿ ನಗರ ಪ್ರದಕ್ಷಿಣೆಗೆ,
ಮಾರ್ಗದ ಮಧ್ಯೆ ಸರ್ಕಲ್ ಬಳಿ
ಅಲ್ಲಲ್ಲಿ ನಿಂತಿದ್ದ ಸಂಚಾರ ಪೊಲೀಸರ
ಕಂಡು ಕೇಕೆ ಹಾಕಿ ಕೈಬೀಸಿ ತಿಳಿಸಿದರು
“ಹೊಸ ವರ್ಷದ ಶುಭಾಶಯ”
ಮುಂದೆ ಸಾಗಿ,ಕಣ್ಣ ಮಂಜಾಗಿ ,
ರಸ್ತೆಯ ಉಬ್ಬೊಂದು ಕಾಣಿಸಲೇ ಇಲ್ಲ.
ಮೋಟಾರ್ ಬೈಕ್ ಹತ್ತಿ ಇಳಿದ ರಭಸಕ್ಕೆ
ರಸ್ತೆಗೆ ಎತ್ತಿ ಬಿಸಾಡಿದಷ್ಟೇ ನೆನಪು.
ಮುಂಜಾನೆ ಸ್ಮೃತಿ ಬಂದಾಗ
ಕೈಕಾಲು ತಲೆಗೆ ಬ್ಯಾಂಡೇಜ್ ಸುತ್ತಿ
ಆಸ್ಪತ್ರೆಯ ಮಂಚದಲ್ಲಿ ನರಳಾಡುತ್ತಿದ್ದರು.
ಅಲ್ಲಿಗೆ ಬಂದ ವೈದ್ಯರು ಶಶ್ರೂಷೆ ಮಾಡಿ ತಿಳಿಸಿದರು “ಹೊಸ ವರ್ಷದ ಶುಭಾಶಯ”
ನೋವಿನಿಂದಲೇ ನರಳುತ್ತಿರುವಾಗಲೇ,
ಫೈಲು ಹಿಡಿದುಕೊಂಡು ಬಂದ ಪೊಲೀಸರು
ರಸ್ತೆ ಅಪಘಾತಕ್ಕೆ ಕೇಳಿದರು,
ತಲೆಬಾಗಿಸಿ ಮೇಲು ದನಿಯಲ್ಲಿ
ಹೊಸ ವರ್ಷಾಚರಣೆ ಎಂದರು.
ಪೊಲೀಸರೂ ಸಹ ಮರೆಯಲಿಲ್ಲ
ತಿಳಿಸಲು* “ಹೊಸ ವರ್ಷದ ಶುಭಾಶಯ.”
ಶವಾಗಾರದಲ್ಲಿ ಚಿರನಿದ್ರೆಯಲ್ಲಿರುವ
ಸವಾರರಿಗೆ ಹೇಳುವವರಾರು
“ಹೊಸ ವರ್ಷದ ಶುಭಾಶಯ” !
ಜಿ.ಎ.ಜಗದೀಶ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ನಿ)
ದಾವಣಗೆರೆ.