ಜಗಳೂರು: ಏ.4 ರಂದು ದಾವಣಗೆರೆ ನಗರದ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರಚಾರ ಸಭೆ ಹಾಗೂ ಪ್ರಜಾಧ್ವನಿ-2 ಕಾರ್ಯಕ್ರಮಕ್ಕೆ ತೆರಳಿದ್ದ ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದ ಕಲ್ಲಪ್ಪ (62) ವರ್ಷದ ವ್ಯಕ್ತಿ ನಾಪತ್ತೆಯಾಗಿದ್ದಾರೆ.
ಶನಿವಾರ ಬೆಳಗ್ಗೆ ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಪಕ್ಷದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಜನರನ್ನು ಸಮಾವೇಶಕ್ಕೆ ಕರೆದೊಯ್ಯಲಾಗಿತ್ತು. ಜಮ್ಮಾಪುರ ಗ್ರಾಮದ ಕಲ್ಲಪ್ಪ ಎಂಬುವರನ್ನು ಕಾರ್ಯಕರ್ತರು ಬಲವಂತ ಮಾಡಿ ಕರೆದೊಯ್ದಿದ್ದರು. ಆದರೆ ಅವರು ವಾಪಾಸ್ ಮನೆಗೆ ಬಂದಿಲ್ಲ. ಅವರಿಗೆ ಓದಲು, ಬರೆಯಲು ಬರುವುದಿಲ್ಲ.
ದಾವಣಗೆರೆಯ ನಗರವನ್ನು ಸರಿಯಾಗಿಲ್ಲ ಬಲ್ಲವರಲ್ಲ. ಹೋಗೋದು ಬೇಡ ಎಂದು ಕುಟುಂಬದವರು ಅಡ್ಡಿ ಪಡಿಸಿದ್ದರೂ ಸಹ ಅವರನ್ನು ಕಾರ್ಯಕರ್ತರು ಬಲವಂತವಾಗಿ ಕರೆದೊಯ್ದು ವಾಪಾಸ್ ಕರೆದುಕೊಂಡು ಬರುತ್ತೇವೆ ಎಂದು ಹೇಳಿ ಬಸ್ ಹತ್ತಿಸಿಕೊಂಡು ಹೋದವರು ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ ಎಂದು ಅವರ ಪುತ್ರ ಕೆ.ಪರಮೇಶ್ ಆರೋಪಿಸಿದ್ದಾರೆ.
ಭಾನುವಾರ ಬೆಳಿಗ್ಗೆಯಿಂದ ದಾವಣಗೆರೆ ನಗರದ ಮೈದಾನದ ಸುತ್ತಮುತ್ತ ಕುಟುಂಬದವರು ಹುಡುಕಾಟ ನಡೆಸಿದರೂ ಅವರ ಸುಳಿವು ದೊರೆತಿಲ್ಲ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಹೋದಾಗ ಇಲ್ಲಿನ ಪೊಲೀಸರು ನಮ್ಮ ವ್ಯಾಪ್ತಿಗೆ ಪ್ರಕರಣ ಬರುವುದಿಲ್ಲ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಪ್ರಕರಣ ಬರಲಿದ್ದು ಅಲ್ಲಿ ಹೋಗಿ ದೂರು ದಾಖಲಿಸಿ ಎಂದು ಹೇಳಿದ್ದಾರೆ. ನಂತರ ಪುತ್ರ ಕೆ.ಪರಮೇಶ್ ಬಡವಾಣೆ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿ ತಂದೆ ಕಲ್ಲಪ್ಪ ಅವರನ್ನು ಪತ್ತೆಮಾಡಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಬಡಾವಣೆ ಪೊಲೀಸರು ಭಾವಚಿತ್ರ, ಆಧಾರ್ ಕಾರ್ಡ್ ಪಡೆದು ಹುಡುಕಿಕೊಡುವ ಭರವಸೆ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾಪತ್ತೆಯಾಗಿರುವ ಕಲ್ಲಪ್ಪ ಅವನರನ್ನು ಪತ್ತೆ ಮಾಡಿ ಕೊಡಬೇಕು. ಓದಲು ಬಾರದ ಸಾಮಾನ್ಯ ಜ್ಞಾನವೂ ಇಲ್ಲದೇ ಇರುವ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಕರೆದೊಯ್ದು ಬೇಜಾವಾಬ್ದಾರಿಯಿಂದ ಬಿಟ್ಟು ಬಂದಿದ್ದಾರೆ. ಅವರನ್ನು ಹುಡುಕಿ ಕೊಡಿ ಎಂದು ಕುಟುಂಬದ ಸದಸ್ಯರಾದ ಜಮ್ಮಾಪುರ ಗ್ರಾಮದ ಬಸವರಾಜಪ್ಪ ಒತ್ತಾಯಿಸಿದ್ದಾರೆ.