
ಚಿತ್ರದುರ್ಗ : ರಾಜ್ಯ ಸರಕಾರ ಎಚ್.ಕಾಂತರಾಜು ವರದಿಯನ್ನು ಕೂಡಲೇ ಸ್ವೀಕರಿಸಿ, ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜ.28ರಂದು ಭಾನುವಾರ ಆಯೋಜಿಸಿರುವ ಐತಿಹಾಸಿಕ ‘ಶೋಷಿತರ ಜಾಗೃತಿ ಸಮಾವೇಶ’ಕ್ಕೆ ಕೋಟೆನಾಡು ಚಿತ್ರದುರ್ಗ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ.ಚಿತ್ರದುರ್ಗ: ನಗರ ಹೊರವಲಯದ ಮಾದಾರ ಚನ್ನಯ್ಯ ಮಠದ ಬಳಿ ಭಾನುವಾರ ಶೋಷಿತ ಸಮುದಾಯದ ವತಿಯಿಂದ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಕ್ಷಣಗಣನೆ ಆರಂಭವಾಗಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಈ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಹಿಂದುಳಿದ ಶೋಷಿತರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಈ ಸಮಾವೇಶಕ್ಕೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಜಿಲ್ಲೆಯ ಅನೇಕ ಶಾಸಕರು ಸಂಸದರು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನ್ಯ ಪಕ್ಷದವರಿಗೂ ನಾವು ಆಹ್ವಾನ ಕೊಟ್ಟಿದ್ದು, ಯಾರೇ ಬೇಕಾದರು ಕಾರ್ಯಕ್ರಮಕ್ಕೆ ಬರಬಹುದು. ಅಷ್ಟೇ ಅಲ್ಲದೆ ಈಗಾಗಲೇ ಕಾರ್ಯಕ್ರಮ ಹಿನ್ನೆಲೆ ಸುಮಾರು 50 ಎಕರೆ ಪ್ರದೇಶದಲ್ಲಿ ವೇದಿಕೆ ಸಹ ನಿರ್ಮಾಣ ಮಾಡಿದ್ದು, ಎರಡರಿಂದ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇಡಲಾಗಿದೆ ಎಂದರು.


ಎಲ್ಲಿಂದ ಜನ ಬರುತ್ತಾರೆ
ರಾಜ್ಯದ ಪ್ರತಿ ಜಿಲ್ಲೆಯಿಂದ ಐದರಿಂದ ಹತ್ತು ಸಾವಿರ ಜನರು ಸಮಾವೇಶಕ್ಕೆ ಬರಲಿದ್ದಾರೆ. ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ, ಹಾವೇರಿ, ಕೊಪ್ಪಳ, ತುಮಕೂರು ಮತ್ತಿತರರ ಜಿಲ್ಲೆಗಳಿಂದ ಜನರು ಬರಲಿದ್ದು, ಹತ್ತು ಸಾವಿರ ವಾಹನಗಳು ಸಮಾವೇಶಕ್ಕೆ ಜನರನ್ನು ಕರೆ ತರಲು ಸಜ್ಜಾಗಿವೆ.
ನಾವು ಕೂಡ ಬಹುಸಂಖ್ಯಾತರು
ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾ ಅಧಿವೇಶನಕ್ಕೆ ಪರ್ಯಾಯವಾಗಿ ಈ ಸಮಾವೇಶ ನಡೆಯುತ್ತಿದೆ. ನಾವೂ ಕೂಡಾ ಬಹುಸಂಖ್ಯಾತರಿದ್ದೇವೆ. ಸಂಘಟಿತವಾಗಿದ್ದೇವೆ ಎನ್ನುವ ಸಂದೇಶ ನೀಡಲು ಈ ಸಮಾವೇಶ ಆಯೋಜಿಸಲಾಗಿದೆ. ಶೋಷಿತರ ಹಕ್ಕೊತ್ತಾಯಗಳಿಗಾಗಿ ನಡೆಸುತ್ತಿರುವ ಈ ಜಾಗೃತಿ ಸಮಾವೇಶಕ್ಕೆ ಎಲ್ಲಪಕ್ಷದ ಹಿಂದುಳಿದ ಮುಖಂಡರು ಬರುವ ನಿರೀಕ್ಷೆ ಇದೆ.
ಕಾಂತರಾಜು ವರದಿ ಜಾರಿಗೆ ಒತ್ತಾಯ
‘ರಾಜ್ಯದ ಹಿಂದುಳಿದವರು, ಶೋಷಿತರ ಏಳಿಗೆಗೆ ಎಚ್.ಕಾಂತರಾಜು ನೇತೃತ್ವದ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಈ ಸಮಾವೇಶ ನಡೆಸಲಾಗುತ್ತಿದೆ. ಕೆಲ ಪಟ್ಟಭದ್ರರು ಕಾಂತರಾಜ್ ವರದಿ ಜಾರಿಗೆ ಅಡ್ಡಿಯಾಗಿದ್ದಾರೆ. ನಮ್ಮನ್ನು ಕೆರಳಿಸಿದವರಿಗೆ ತಿರುಗೇಟು ನೀಡಲಿಕ್ಕಾಗಿಯೇ ಈ ಸಮಾವೇಶ ಮಾಡುತ್ತಿದ್ದೇವೆ’ ಎಂದು ಅಹಿಂದ ಮುಖಂಡರು ಹೇಳುತ್ತಾರೆ.
ಏಳು ನೂರು ಗಣ್ಯರು
ಸಮಾವೇಶದಲ್ಲಿ ಮುಖ್ಯ ವೇದಿಕೆಯ ಜತೆ ಎರಡು ಉಪ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಮುಖ್ಯವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಗಣ್ಯರು, ಶೋಷಿತ, ಹಿಂದುಳಿದ ಜಾತಿಗಳ ಮಂತ್ರಿಗಳು, ಶಾಸಕರು ಸೇರಿದಂತೆ 300 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮುಖ್ಯವೇದಿಕೆಯ ಎರಡೂ ಬದಿಯಲ್ಲಿ ರೂಪಿಸಿರುವ ವೇದಿಕೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು, ಮಾಜಿ ಮಂತ್ರಿಗಳು, ಮಾಜಿ ಶಾಸಕರು ಸೇರಿ ಒಟ್ಟು 400 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ
ಮೂರು ಲಕ್ಷ ಜನಕ್ಕೆ ಆಸನ
ಅಂದಾಜು 150 ಎಕರೆ ಜಾಗದಲ್ಲಿ ಸಮಾವೇಶದ ಪೆಂಡಾಲ್ ಹಾಕಲಾಗಿದ್ದು, ಮೂರು ಲಕ್ಷ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಮೂರು ಲಕ್ಷ ಜನರಿಗೆ ಮಾಂಸಾಹಾರ, ಸಸ್ಯಹಾರ ಊಟದ ವ್ಯವಸ್ಥೆ ಮಾಡಲಾಗಿದೆ. ಆಯಾ ಭಾಗದಿಂದ ಬರುವ ವಾಹನಗಳ ನಿಲುಗಡೆಗೆ ಅದೇ ಮಾರ್ಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ರೀತಿಯಲ್ಲಿ ಅಹಿಂದ ಸಮಾವೇಶ ನಡೆಯಲಿದ್ದು, ಕೈಗೊಳ್ಳುವ ನಿರ್ಣಯಗಳ ಬಗ್ಗೆ ಕುತುಹೂಲವಿದೆ.