
ಶಿವಮೊಗ್ಗ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಉತ್ತಮ ಮಳೆ ಸುರಿಯಿತು. ಶುಕ್ರವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ನಗರದಲ್ಲಿ ಮಧ್ಯಾಹ್ನ ಬಿಸಿಲ ಝಳ ಜೋರಾಗಿದ್ದು, ಸೆಕೆಯೂ ಹೆಚ್ಚಿತ್ತು. ಸಂಜೆ ಮೋಡ ಮುಚ್ಚಿದ ವಾತಾವರಣ ಜೋರು ಮಳೆಯ ಮುನ್ಸೂಚನೆ ನೀಡಿತ್ತು. ಮುಂಗಾರು ಪೂರ್ವದ ದಿನಗಳಂತೆ ಗಂಟೆಯೊಪ್ಪತ್ತು ಮಳೆ ಆರ್ಭಟಿಸಿ ಸುಮ್ಮನಾಗಬಹುದು ಎಂಬ ಭಾವನೆಯನ್ನು ಸುಳ್ಳಾಗಿಸಿದ ವರ್ಷಧಾರೆ ರಾತ್ರಿಗೂ ವಿಸ್ತಾರಗೊಂಡಿತು.
ಬಿಸಿಲಿನಿAದ ಹೈರಾಣಾಗಿದ್ದ ನಗರಕ್ಕೆ ಸುದೀರ್ಘ ಹೊತ್ತು ಸುರಿದ ಮಳೆ ಮಜ್ಜನದ ಭಾವ ತಂದಿತು. ಸೆಕೆಯಿಂದ ಬಳಲಿದ್ದವರಿಗೆ ತೇವದ ಆರ್ದ್ರ ಮೈ-ಮನಸ್ಸನ್ನು ತಂಪಾಗಿಸಿತು. ಮಳೆಯ ಜೋರಿಗೆ ಬೆದರಿದ ಶಿವಮೊಗ್ಗದ ಸಂಜೆಯ ರಂಗು ಬೇಗನೇ ಗೂಡು ಸೇರಿಕೊಂಡಿತು. ಹೀಗಾಗಿ ರಸ್ತೆಗಳು ನಿರ್ಜನಗೊಂಡು, ಸಂಜೆ ಬೀದಿ ಬದಿಯಲ್ಲಿ ಭರಪೂರ ವಹಿವಾಟಿನ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಮೂಡಿಸಿತು.ಹಣ್ಣು-ತರಕಾರಿ ಮಾರುವವರೂ ಬೇಗನೇ ಮನೆ ಸೇರಬೇಕಾಯಿತು. ಮಜ್ಜನದ ಹಾದಿಯಲ್ಲಿ ಆಗಾಗ ವಾಹನಗಳ ಓಡಾಟ ಮಾತ್ರ ನಗರಕ್ಕೆ ಜೀವ ತುಂಬಿತ್ತು. ಮಳೆಯ ರಾಗಕ್ಕೆ ಮನಸ್ಸು ಪ್ರಫುಲ್ಲಗೊಂಡು ರಾತ್ರಿ ಹೊತ್ತೇರುವ ಮುನ್ನವೇ ನಗರ ಹೊದ್ದು ಮಲಗಿತು.